ಮೈಸೂರು: ಹುಣಸೂರು ತಾಲೂಕಿನ ಹೊಸರಾಮನಹಳ್ಳಿ ಗ್ರಾಮದಲ್ಲಿ 12 ವರ್ಷದ ನಂತರ ದಂಡಮ್ಮ ದೇವಿ ಉತ್ಸವ ನಡೆಯುತ್ತಿದ್ದು, ಅದಕ್ಕಾಗಿ ಭರದ ಸಿದ್ಧತೆ ನಡೆದಿದೆ. ಸಂಕ್ರಾಂತಿ ಸುಗ್ಗಿ ದಿನವಾದ ಶುಕ್ರವಾರದಿಂದ ಗ್ರಾಮಸ್ಥರೆಲ್ಲರೂ ಸೇರಿಕೊಂಡು ತಮ್ಮ ತಮ್ಮ ಶಕ್ತಿ ಅನುಸಾರ ದಂಡಮ್ಮ ದೇವಾಲಯಕ್ಕೆ ದವಸ ಧಾನ್ಯಗಳನ್ನು ದಾನ ಮಾಡುವ ಮೂಲಕ ಲಕ್ಷಾಂತರ ಮಂದಿ ಅನ್ನ ಸಂತರ್ಪಣೆಗೆ ಕೈಜೋಡಿಸುತ್ತಿದ್ದಾರೆ.

ಫೆ.19,20 ದಂಡಮ್ಮ ದೇವಿ: ಉತ್ಸವಕ್ಕೆ ಸಂಕ್ರಾಂತಿಯಂದು ಭತ್ತದ ರಾಶಿಗೆ ಪೂಜೆ ಸಲ್ಲಿಸಿದ ಗ್ರಾಮಸ್ಥರು, ರಾಶಿ ರಾಶಿ ಭತ್ತವನ್ನು ಸಂಗ್ರಹಿಸಿ ದೇವಾಲಯಕ್ಕೆ ಕುಕ್ಕೆ, ಮೊರೆ, ಇತರ ವಸ್ತುಗಳಲ್ಲಿ ತುಂಬಿಕೊಂಡು ಬಂದು ಸುರಿದರು. ಹೊಸರಾಮನಹಳ್ಳಿ, ಬೋಳನಹಳ್ಳಿ, ಜೋಳೆನಹಳ್ಳಿ ಬಿಳಿಕೆರೆ, ಮಲ್ಲಿನಾಥಪುರ, ಶ್ಯಾನಭೋಗನಹಳ್ಳಿ, ಕೃಷ್ಣಾಪುರ, ಎಮ್ಮೆಕೊಪ್ಪಲು, ರಂಗಯಗಯನಕೊಪ್ಪಲು, ಹಳೇಬೀಡು, ಆಯರಹಳ್ಳಿ, ಸಬ್ಬನಹಳ್ಳಿ, ಸಾತಿಗ್ರಾಮ ಸೇರಿದಂತೆ ಸುಮಾರು 33ಕ್ಕೂ ಅಧಿಕ ಗ್ರಾಮಗಳ ಗ್ರಾಮಸ್ಥರು ದಂಡಮ್ಮ ದೇವಿ ಪೂಜೆ ಮಾಡಿಕೊಂಡು ಬರುತ್ತಿರುವುದು ವಿಶೇಷ. ಇದೇ 19-20 ರಂದು ಎರಡು ದಿನಗಳ ಕಾಲ ಈ ದೇವಿಯ ಜಾತ್ರೆ ನಡೆಯಲಿದ್ದು, ಜಾತ್ರೆ ನೋಡಲು ಈ 33 ಹಳ್ಳಿಗಳು ಅಷ್ಟೇ ಅಲ್ಲದೇ, ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು, ಹಾಸನ, ಸೇರಿದಂತೆ ಹಲವು ಜಿಲ್ಲೆಗಳಿಂದ ಭಕ್ತರು ಇಲ್ಲಿಗೆ ಬಂದು ಪೂಜೆ ಸಲ್ಲಿಸಲಿದ್ದಾರೆ.

ಭತ್ತ ಎತ್ತುವುದು: ದಂಡಮ್ಮ ದೇವಿಗೆ, ಗ್ರಾಮಸ್ಥರು ತಾವು ಬೆಳೆದ ಮೊದಲ ಬೆಳೆಯನ್ನು ದೇವರಿಗೆ ಅರ್ಪಣೆ ಮಾಡುವುದು ತಲೆತಲಾಂತರದಿಂದ ಮಾಡಿಕೊಂಡು ಬಂದಿದ್ದಾರೆ. ಹಾಗಾಗಿ ಸುಗ್ಗಿಯ ಸಂಕ್ರಾಂತಿಯಂದು ಮೊದಲ ಭತ್ತ ನೀಡುತ್ತಾರೆ. ಅದಕ್ಕಾಗಿ ಭತ್ತ ಎತ್ತುವುದು ಎನ್ನುತ್ತಾರೆ ಗ್ರಾಮಸ್ಥರು.

ಹಬ್ಬ ಶುರುವಾಗುವರೆಗೂ ದವಸ ಧಾನ್ಯಗಳನ್ನು ನಿತ್ಯ ಗ್ರಾಮಸ್ಥರು ಹೀಗೆ ತಂದು ಸುರಿಯುತ್ತಾರೆ. ಸಂಗ್ರಹವಾಗುವ ಭತ್ತವನ್ನು ಹಬ್ಬ (ಉತ್ಸವ) ಇನ್ನೊಂದು ವಾರ ಇರುವಾಗ ಭತ್ತ ಬಿಡಿಸುವ ಮಿಲ್ಗೆ ಹಾಕಿ, ಅಕ್ಕಿ ಮಾಡಿಕೊಳ್ಳುತ್ತಾರೆ. ಇದನ್ನೇ ಜಾತ್ರೆಗೆ ಬಂದ ಭಕ್ತರಿಗೆ ಅನ್ನ ಸಂತರ್ಪಣೆ ಮಾಡುತ್ತಾರೆ. 12 ವರ್ಷದ ಬಳಿಕ ಉತ್ಸವ ನಡೆಯುತ್ತಿರುವುದರಿಂದ ಪ್ರತಿ ಮನೆಯಲ್ಲಿ ಸಡಗರ, ಸಂಭ್ರಮ ಮನೆ ಮಾಡಿದೆ.

ಇದನ್ನೂ ಓದಿ: ಅದ್ದೂರಿಯಾಗಿ ಜರುಗಿದ ಹರಜಾತ್ರೆ: ರೊಟ್ಟಿ - ಪಲ್ಯೆ, ಹುಗ್ಗಿ, ಮಿರ್ಚಿ ಸವಿದ ಭಕ್ತರು!